ಪ್ರಯಾಣ ಮಾಡುವಾಗ ಟೈಫಾಯಿಡ್ ಬರುವ ಸಾಧ್ಯತೆಗಳನ್ನು ಕಡಿಮೆ ಮಾಡಲು ಸಲಹೆಗಳು

ಭಾರತದಲ್ಲಿ ಟೈಫಾಯಿಡ್ ಅತ್ಯಂತ ಪ್ರಮುಖ ಸಾರ್ವಜನಿಕ ಆರೋಗ್ಯ ಕಾಳಜಿಯಾಗಿಯೇ ಉಳಿದಿದೆ. 2023 ರಲ್ಲಿ 5 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಇಂದು ಹೆಚ್ಚು ಹೆಚ್ಚು ಭಾರತೀಯರು ಒಂದು ದೇಶದಿಂದ ಇನ್ನೊಂದು ದೇಶಕ್ಕೆ (ಮತ್ತು ದೇಶದ ಒಳಗೆ) ಪ್ರಯಾಣ ಮಾಡುತ್ತಿರುವುದರಿಂದ, ಟೈಫಾಯಿಡ್ ಬಗ್ಗೆ ಹೆಚ್ಚು ಎಚ್ಚರಿಕೆ ವಹಿಸುವುದು ಅತ್ಯಂತ ಅಗತ್ಯದ್ದಾಗಿದೆ. ನಿಮ್ಮ ಮುಂದಿನ ಪ್ರವಾಸದ ಮೊದಲು ಮತ್ತು ಸಮಯದಲ್ಲಿ ಕೆಲವು ತಡೆಗಟ್ಟುವ ಕ್ರಮಗಳನ್ನು ಅನುಸರಿಸುವುದರಿಂದ ನಿಮ್ಮನ್ನು ಸುರಕ್ಷಿತವಾಗಿರಿಸಿಕೊಳ್ಳಬಹುದು.
ಟೈಫಾಯಿಡ್ ಎಂದರೇನು?
ಟೈಫಾಯಿಡ್ ಎಂಬುದು ಸಾಲ್ಮೊನೆಲ್ಲಾ ಟೈಫಿ ಎಂಬ ಬ್ಯಾಕ್ಟೀರಿಯಾದಿಂದ ಹರಡುವ ಸೋಂಕು. ಇದು ಮಲಿನಗೊಂಡ ನೀರು ಮತ್ತು ಆಹಾರದಿಂದ ಹರಡುತ್ತದೆ. ಇದರ ಅತ್ಯಂತ ಸಾಮಾನ್ಯ ಗುಣಲಕ್ಷಣಗಳೆಂದರೆ, ಜ್ವರ, ತಲೆನೋವು ಮತ್ತು ತೀವ್ರ ಹೊಟ್ಟೆನೋವು. ವಿಶ್ವ ಆರೋಗ್ಯ ಸಂಸ್ಥೆಯು ಭಾರತದಂತಹ ದಕ್ಷಿಣ ಏಷ್ಯಾ ದೇಶಗಳಲ್ಲಿ ಟೈಫಾಯಿಡ್ ಒಂದು ಪ್ರಮುಖ ಸಾರ್ವಜನಿಕ ಆರೋಗ್ಯ ಕಳವಳ ಎಂದು ಗುರುತಿಸಿದೆ. ಶುಚಿತ್ವನ್ನು ಕಾಪಾಡಿಕೊಳ್ಳದೇ ಇರುವುದು ಈ ರೋಗ ಹರಡುವುದಕ್ಕೆ ಪ್ರಮುಖ ಕಾರಣವಾಗಿದೆ.
ಪ್ರಯಾಣ ಮಾಡುವಾಗ ಟೈಫಾಯಿಡ್ ನಿಂದ ಸುರಕ್ಷಿತವಾಗಿರುವುದು ಹೇಗೆ?
ಟೈಫಾಯಿಡ್ ನಿಂದ ಸುರಕ್ಷಿತವಾಗಿರಲು, ನೀವು ಮೂರು ಸರಳ ಸಲಹೆಗಳನ್ನು ಅನುಸರಿಸಬಹುದು:
- WASH (ನೀರು, ಶುಚಿತ್ವ ಮತ್ತು ನೈರ್ಮಲ್ಯ) ಶಿಷ್ಟಾಚಾರವನ್ನು ಅನುಸರಿಸಿ
- ನಿಮ್ಮ ಆಹಾರ ಆಯ್ಕೆಗಳ ಬಗ್ಗೆ ಎಚ್ಚರಿಕೆಯಿಂದಿರಿ
- ಪ್ರಯಾಣ ಮಾಡುವುದಕ್ಕೂ ಮೊದಲು ಟೈಫಾಯಿಡ್ ಲಸಿಕೆಯನ್ನು ತೆಗೆದುಕೊಳ್ಳಿ
1. WASH ಶಿಷ್ಟಾಚಾರ
ಪ್ರಯಾಣ ಮಾಡುವಾಗ, ನಿಮ್ಮನ್ನು ನೀವು ಸುರಕ್ಷಿತವಾಗಿಟ್ಟುಕೊಳ್ಳಲು ಕಟ್ಟುನಿಟ್ಟಾದ ಶುಚಿತ್ವ ಮಾನದಂಡಗಳನ್ನು ಅನುಸರಿಸಬೇಕು. ಸೋಪ್ ಮತ್ತು ನೀರನ್ನು ಬಳಸಿ ಕೈಗಳನ್ನು ಪದೇ ಪದೇ ತೊಳೆದುಕೊಳ್ಳಿ. ಅದರಲ್ಲೂ ವಿಶೇಷವಾಗಿ, ಶೌಚಾಲಯವನ್ನು ಬಳಸಿದ ನಂತರ ಮತ್ತು ಆಹಾರ ಸೇವನೆ ಮಾಡುವ ಮೊದಲು ಈ ಪದ್ಧತಿಯನ್ನು ಅನುಸರಿಸಲೇಬೇಕು. ಸೋಪ್ ಮತ್ತು ನೀರು ಲಭ್ಯವಿಲ್ಲದಿದ್ದರೆ, 60% ವರೆಗೆ ಅಲ್ಕೋಹಾಲ್ ಇರುವ ಸ್ಯಾನಿಟೈಸರ್ ಬಳಸಿ.
2. ಸುರಕ್ಷಿತ ಆಹಾರ ಆಯ್ಕೆಗಳು
- ಸಲಾಡ್‌ಗಳು ಸೇರಿದಂತೆ ಹಸಿ ಅಥವಾ ಬೇಯಿಸದ ಆಹಾರವನ್ನು ಸೇವಿಸಬೇಡಿ.
- ಬಿಸಿ, ತಾಜಾ ಬೇಯಿಸಿದ ಆಹಾರವನ್ನು ಆಯ್ಕೆ ಮಾಡಿ. ಬಫೆ ಬಳಸಬೇಡಿ.
- ಫಿಲ್ಟರ್ ಮಾಡಿಲ್ಲದ ನೀರನ್ನು ಕುಡಿಯಬೇಡಿ. ನೀರಿನ ಮೂಲದ ಬಗ್ಗೆ ಖಾತರಿ ಇಲ್ಲದಿದ್ದರೆ ಕುದಿಸಿದ ಅಥವಾ ಬಾಟಲಿಯಲ್ಲಿನ ನೀರನ್ನು ಸೇವಿಸಿ.
- ಸಂಸ್ಕರಿಸಿದ ನೀರಿನಿಂದ ಐಸ್ ಕ್ಯೂಬ್‌ಗಳನ್ನು ಮಾಡಿರುವ ಬಗ್ಗೆ ಖಾತ್ರಿ ಇಲ್ಲದಿದ್ದರೆ, ಪಾನೀಯದಲ್ಲಿ ಐಸ್ ಕ್ಯೂಬ್‌ಗಳನ್ನು ಹಾಕಿಕೊಳ್ಳಬೇಡಿ. ಬಿಸಿ ಪಾನೀಯ, ಶುಚಿಯಾಗಿ ಮಾಡಿದ ಜ್ಯೂಸ್‌ಗಳು ಅಥವಾ ಪ್ಯಾಕ್ ಮಾಡಲಾದ ಪಾನೀಯವನ್ನು ಆಯ್ಕೆ ಮಾಡಿ.
- ಪಾಶ್ಚರೀಕರಿಸಿದ ಹಾಲು, ಹಾಲಿನ ಉತ್ಪನ್ನಗಳು ಅಥವಾ ಸರಿಯಾಗಿ ಬೇಯಿಸದ ಮೊಟ್ಟೆಗಳನ್ನು ಸೇವಿಸಬೇಡಿ.
- ಬಾಳೆಹಣ್ಣು, ಕಿತ್ತಳೆ ಮುಂತಾದ ಸಿಪ್ಪೆ ಸುಲಿದು ತಿನ್ನಬಹುದಾದ ಹಣ್ಣುಗಳನ್ನು ಅಥವಾ ಚೆನ್ನಾಗಿ ತೊಳೆಯಬಹುದಾದ ಹಣ್ಣುಗಳನ್ನು ತಿನ್ನಿರಿ.
3. ಟೈಫಾಯಿಡ್ ಲಸಿಕೆ ಪಡೆಯಿರಿ
ಟೈಫಾಯಿಡ್ ವಿರುದ್ಧ ಉತ್ತಮ ರಕ್ಷಣೆಯೆಂದರೆ ಲಸಿಕೆ ಹಾಕಿಸಿಕೊಳ್ಳುವುದಾಗಿದೆ. ದೀರ್ಘ ಕಾಲದವರೆಗೆ ರಕ್ಷಣೆಗಾಗಿ ಟೈಫಾಯಿಡ್ ಕಾಂಜುಗೇಟ್ ಲಸಿಕೆಗಳನ್ನು (ಟಿಸಿವಿಗಳು) WHO ಶಿಫಾರಸು ಮಾಡಿದೆ. ಲಸಿಕೆ ಹಾಕಿಸಿಕೊಳ್ಳುವ ಬಗ್ಗೆ ಪ್ರಯಾಣಕ್ಕೂ ಮೊದಲು ಕನಿಷ್ಠ ಎರಡು ತಿಂಗಳುಗಳ ಮೊದಲು ನಿಮ್ಮ ವೈದ್ಯರ ಜೊತೆಗೆ ಸಮಾಲೋಚನೆ ನಡೆಸಿ.
ಲಸಿಕೆ ನಿಜಕ್ಕೂ ಅಗತ್ಯವೇ?
ಅತ್ಯಂತ ಎಚ್ಚರಿಕೆ ವಹಿಸುವ ಪ್ರಯಾಣಿಕರಿಗೂ ಕೂಡಾ ಟೈಫಾಯಿಡ್ ಕಾಣಿಸಿಕೊಳ್ಳುವ ಅಪಾಯ ಇರುತ್ತದೆ. ಲಸಿಕೆಯು ಸೋಂಕು ಕಾಣಿಸಿಕೊಳ್ಳುವ ಅಪಾಯವನ್ನು ಕಡಿಮೆ ಮಾಡುವುದಷ್ಟೇ ಅಲ್ಲ, ಅದು ಹರಡುವುದನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನೈಸರ್ಗಿಕ ಸೋಂಕು ದೀರ್ಘಕಾಲದ ವರೆಗೆ ರೋಗನಿರೋಧಕತೆಯನ್ನು ಒದಗಿಸದೇ ಇರುವುದರಿಂದ, ಟೈಫಾಯಿಡ್ ನಿಂದ ಚೇತರಿಸಿಕೊಂಡವರು ಕೂಡಾ ಮತ್ತೆ ಟೈಫಾಯಿಡ್ ಕಾಣಿಸಿಕೊಳ್ಳುವ ಅಪಾಯ ಹೊಂದಿರುತ್ತಾರೆ ಮತ್ತು ಅವರಿಗೆ ಲಸಿಕೆ ಅಗತ್ಯವಿರುತ್ತದೆ.
ಉಪಸಂಹಾರ
ಟೈಫಾಯಿಡ್ ಅನ್ನು ತಡೆಯಬಹುದು. ಆದರೆ, ಜಾಗತಿಕವಾಗಿ ಮತ್ತು ಭಾರದಲ್ಲಿ ಕೋಟ್ಯಂತರ ಜನರಿಗೆ ಇದು ಬಾಧಿಸುತ್ತಿದೆ. ನೀವು ದೇಶದೊಳಗೆ ಪ್ರಯಾಣಿಸುತ್ತಿರಲಿ ಅಥವಾ ದೇಶದ ಹೊರಗೆ ಪ್ರಯಾಣಿಸುತ್ತಿರಲಿ, ಸರಿಯಾದ ಮುನ್ನೆಚ್ಚರಿಕೆಯನ್ನು ವಹಿಸುವುದು ಅತ್ಯಂತ ಅಗತ್ಯವಾಗಿದೆ. ಉತ್ತಮ ನೈರ್ಮಲ್ಯ ಅಭ್ಯಾಸಗಳನ್ನು ಅನುಸರಿಸುವುದು, ಸ್ಮಾರ್ಟ್ ಆಹಾರ ಆಯ್ಕೆಗಳನ್ನು ಮಾಡುವುದು ಮತ್ತು ಲಸಿಕೆಯನ್ನುಪಡೆಯುವುದು ಅತ್ಯಂತ ಪರಿಣಾಮಕಾರಿ ವಿಧಾನವಾಗಿದೆ. ಇದರಿಂದ ನೀವು ಮತ್ತು ನಿಮ್ಮ ಸುತ್ತಲೂ ಇರುವ ಜನರನ್ನು ನೀವು ರಕ್ಷಿಸಬಹುದು. ಟೈಫಾಯಿಡ್ ನಿಮ್ಮ ಪ್ರಯಾಣಕ್ಕೆ ಅಡ್ಡಿಯಾಗಲು ಬಿಡಬೇಡಿ. ಮುಂಚಿತವಾಗಿ ಜಾಗರೂಕರಾಗಿರಿ ಮತ್ತು ಚಿಂತೆಯಿಲ್ಲದ ಪ್ರವಾಸಕ್ಕಾಗಿ ನಿಮ್ಮ ಆರೋಗ್ಯಕ್ಕೆ ಆದ್ಯತೆ ನೀಡಿ.
ಉಲ್ಲೇಖಗಳು
ಹಕ್ಕುತ್ಯಾಗ: ಭಾರತ್ ಬಯೋಟೆಕ್ ಇಂಟರ್ನ್ಯಾಷನಲ್ ಲಿಮಿಟೆಡ್ ನಿಂದ ಸಾರ್ವಜನಿಕ ಜಾಗೃತಿ ಉಪಕ್ರಮ. ಈ ಮಾಹಿತಿಯು ಸಾಮಾನ್ಯ ಜಾಗೃತಿಗಾಗಿ ಮಾತ್ರ ಮತ್ತು ವೈದ್ಯಕೀಯ ಸಲಹೆಯನ್ನು ರೂಪಿಸುವುದಿಲ್ಲ. ತೋರಿಸಿರುವ ವೈದ್ಯರು, ವೈದ್ಯಕೀಯ ಸೌಲಭ್ಯಗಳು ಮತ್ತು ಗ್ರಾಫಿಕ್ಸ್ ವಿವರಣಾತ್ಮಕ ಉದ್ದೇಶಗಳಿಗಾಗಿ ಮಾತ್ರ. ಯಾವುದೇ ವೈದ್ಯಕೀಯ ಸಲಹೆ ಅಥವಾ ನಿಮ್ಮ ಸ್ಥಿತಿಯ ಬಗ್ಗೆ ನೀವು ಹೊಂದಿರುವ ಯಾವುದೇ ಪ್ರಶ್ನೆ ಅಥವಾ ಕಾಳಜಿಗಾಗಿ, ನಿಮ್ಮ ವೈದ್ಯರನ್ನು ಸಂಪರ್ಕಿಸಿ.