ಬೀದಿ ಬದಿಯ ಆಹಾರ ಸೇವಿಸುವುದರಿಂದ ಟೈಫಾಯಿಡ್ ಬರಬಹುದೇ?

ಟೈಫಾಯಿಡ್ ಜ್ವರವು ಬ್ಯಾಕ್ಟೀರಿಯಾದಿಂದ ಉಂಟಾಗುವ ಸೋಂಕು. ಇದು ಮಲಿನ ಆಹಾರ ಅಥವಾ ನೀರನ್ನು ಸೇವಿಸಿದಾಗ ಹರಡುತ್ತದೆ. ಟೈಫಾಯಿಡ್ ಸಾಲ್ಮೊನೆಲ್ಲಾ ಟೈಫಿ ಎಂಬ ಬ್ಯಾಕ್ಟೀರಿಯಾ ಕಾರಣವಾಗಿದ್ದು, ಇದು ಮನುಷ್ಯನ ಕರುಳಿನಲ್ಲಿ ಇರುತ್ತದೆ. ಈ ಬ್ಯಾಕ್ಟೀರಿಯಾ ಸೋಂಕು ಕಾಣಿಸಿಕೊಂಡಾಗ ಮಾತ್ರವಲ್ಲ, ಕೆಲವೊಮ್ಮೆ ಚೇತರಿಸಿಕೊಂಡ ವ್ಯಕ್ತಿಗಳಿಂದಲೂ ಹರಡಬಹುದು. ಬ್ಯಾಕ್ಟೀರಿಯಾ ಮಲ ಅಥವಾ ಮೂತ್ರದ ಮೂಲಕ ಹೊರಬೀಳುತ್ತದೆ. ಸೋಂಕಿತ ವ್ಯಕ್ತಿಯಿಂದ ಅಶುದ್ಧ ನೀರು ಅಥವಾ ಆಹಾರದ ಮೂಲಕ ಇತರರಿಗೆ ಹರಡುವ ಸಾಧ್ಯತೆ ಇರುತ್ತದೆ.
ಟೈಫಾಯಿಡ್ ಹೇಗೆ ಹರಡುತ್ತದೆ?
ಸಾಮಾನ್ಯವಾಗಿ, ಕಳಪೆ ವೈಯಕ್ತಿಕ ಶುಚಿತ್ವ ಹೊಂದಿರುವ ವ್ಯಕ್ತಿಯೊಬ್ಬರು ಆಹಾರವನ್ನು ಸಿದ್ಧಪಡಿಸಿದಾಗ, ಅಂಥ ಆಹಾರ ಮತ್ತು ಪಾನೀಯಗಳಿಂದ ಸಾಲ್ಮೊನೆಲ್ಲಾ ಟೈಫಿ ಬ್ಯಾಕ್ಟೀರಿಯಾ ಹರಡಬಹುದು. ಉದಾಹರಣೆಗೆ, ಸೋಂಕಿತ ವ್ಯಕ್ತಿ ಶೌಚಾಲಯ ಬಳಸಿದ ನಂತರ ಕೈ ತೊಳೆಯದೆ ಇದ್ದರೆ, ನಂತರ ಅವರು ಇತರರಿಗೆ ಊಟ ಅಥವಾ ಪಾನೀಯವನ್ನು ಸಿದ್ಧಪಡಿಸಿದರೆ, ಆಹಾರದಲ್ಲಿ ಬ್ಯಾಕ್ಟೀರಿಯಾ ಸೇರಬಹುದು. ಇನ್ನೂ ಕೆಲವು ಸಂದರ್ಭಗಳಲ್ಲಿ, ಚರಂಡಿ ನೀರು ಆಹಾರ ಅಥವಾ ಕುಡಿಯುವ ನೀರಿನೊಂದಿಗೆ ಮಿಶ್ರವಾಗಿದ್ರೆ ಅದು ಮಾಲಿನ್ಯ ಉಂಟುಮಾಡಬಹುದು.
ಬೀದಿ ಬದಿಯ ಆಹಾರವನ್ನು ಸೇವಿಸುವ ಅಪಾಯ
ಮನೆಯಲ್ಲಿ ತಯಾರಿಸಿದ ಆಹಾರವನ್ನು ಸಾಮಾನ್ಯವಾಗಿ ಸೇವನೆಗೆ ಸುರಕ್ಷಿತ ಎಂದು ಪರಿಗಣಿಸಲಾಗುತ್ತದೆ. ಆದರೆ, ಬೀದಿ ಬದಿಯ ಆಹಾರ ಅಪಾಯಕಾರಿಯಾಗಿದೆ ಎಂಬುದು ಸಾಮಾನ್ಯ ನಂಬಿಕೆಯಾದರೂ, ಇದು ಎಲ್ಲ ಸಂದರ್ಭಗಳಿಗೂ ಅನ್ವಯಿಸುವುದಿಲ್ಲ. ಟೈಫಾಯಿಡ್ ಮನೆಯಲ್ಲಿಯೂ ಹರಡಬಹುದು, ವಿಶೇಷವಾಗಿ ಶುಚಿತ್ವದ ಅಭ್ಯಾಸಗಳನ್ನು ಸರಿಯಾಗಿ ಪಾಲಿಸದಿದ್ದರೆ. ಮನೆ ಆಹಾರವು ಸಾಮಾನ್ಯವಾಗಿ ಹೆಚ್ಚು ಸ್ವಚ್ಛತೆಯ ನಿಯಮಗಳನ್ನು ಅನುಸರಿಸಿ ತಯಾರಿಸಲಾಗುತ್ತದೆ. ಆದರೆ ಬೀದಿ ಬದಿ ಆಹಾರ ತಯಾರಿಕೆಯಲ್ಲಿ ಕೆಲವೊಮ್ಮೆ ಈ ನಿಯಮಗಳು ತಪ್ಪಿಹೋಗುವ ಸಾಧ್ಯತೆ ಇರುತ್ತದೆ, ಇದರ ಪರಿಣಾಮವಾಗಿ ಸೋಂಕು ಹರಡುವ ಅಪಾಯ ಹೆಚ್ಚು.
ಬೀದಿ ಬದಿ ಆಹಾರವು ಮಾಲಿನ್ಯಗೊಳ್ಳುವ ಸಾಧ್ಯತೆ ಹೆಚ್ಚು ಇರುತ್ತದೆ. ಸಾಮಾನ್ಯವಾಗಿ, ಬೀದಿ ವ್ಯಾಪಾರಿಗಳು ಬಳಸುವ ನೀರನ್ನು ಫಿಲ್ಟರ್ ಮಾಡಿಲ್ಲದಿರಬಹುದು ಅಥವಾ ಕುದಿಸದೆ ಇರಬಹುದು. ಕೆಲವೊಮ್ಮೆ ಅವರು ಕುಡಿಯಲು ಶುದ್ಧ ನೀರನ್ನು ಬಳಸಿದರೂ, ಆಹಾರ ತಯಾರಿಸುವವರು ಕೈ ತೊಳೆಯದೆ ಅಡುಗೆ ಮಾಡಿರಬಹುದು. ಪಾತ್ರೆ ತೊಳೆಯಲು ಬಳಸುವ ನೀರೂ ಕೆಲವೊಮ್ಮೆ ಅಶುದ್ಧವಾಗಿರುತ್ತದೆ. ಈ ಎಲ್ಲಾ ಕಾರಣಗಳಿಂದ ಆಹಾರದಲ್ಲಿ ಬ್ಯಾಕ್ಟೀರಿಯಾ ಸೇರುವ ಸಾಧ್ಯತೆ ಹೆಚ್ಚಾಗುತ್ತದೆ. ಇನ್ನೂ, ಕೆಲವೊಂದು ಸಂದರ್ಭಗಳಲ್ಲಿ, ಈ ವ್ಯಾಪಾರಿಗಳು ಶುಚಿಯಾಗಿಲ್ಲದ ಪ್ರದೇಶಗಳಲ್ಲಿ – ಉದಾಹರಣೆಗೆ, ಪಾದಚಾರಿ ಮಾರ್ಗಗಳು ಅಥವಾ ರಸ್ತೆಯ ಬದಿಗಳಲ್ಲಿ – ಆಹಾರ ಮಾರುತ್ತಿರುತ್ತಾರೆ. ಇದರಿಂದಾಗಿ ಆಹಾರವು ಧೂಳು, ಕೀಟಗಳು ಮತ್ತು ಇತರ ಮಾಲಿನ್ಯಕ್ಕೆ ತುತ್ತಾಗಬಹುದು.
ಬಹುತೇಕ ಬೀದಿ ಬದಿ ವ್ಯಾಪಾರಿಗಳು ತಮ್ಮ ಆಹಾರವನ್ನು ಶೆಲ್ಫ್‌ಗಳ ಮೇಲೆ ಮುಚ್ಚಳವಿಲ್ಲದೆ ಪ್ರದರ್ಶಿಸುತ್ತಾರೆ. ಇದರಿಂದ ಅದು ಗ್ರಾಹಕರಿಗೆ ಆಕರ್ಷಕವಾಗಬಹುದು, ಆದರೆ ಈ ಆಹಾರವನ್ನು ನೊಣಗಳು ಮುಟ್ಟುವ ಸಾಧ್ಯತೆ ಹೆಚ್ಚಾಗುತ್ತದೆ. ಇಂಥ ಮಾಲಿನ್ಯದಿಂದ ಸಾಲ್ಮೊನೆಲ್ಲಾ ಟೈಫಿ ಬ್ಯಾಕ್ಟೀರಿಯಾ ಹರಡುವ ಸಾಧ್ಯತೆ ಇದೆ, ಇದರಿಂದ ಟೈಫಾಯಿಡ್ ಉಂಟಾಗಬಹುದು.
ನನ್ನನ್ನು ಸುರಕ್ಷಿತವಾಗಿಟ್ಟುಕೊಳ್ಳುವುದಕ್ಕೆ ನಾನು ಏನು ಮಾಡಬಹುದು?
ಅದೃಷ್ಟವಶಾತ್, ಕೆಲವು ಸುರಕ್ಷಿತ ಹವ್ಯಾಸಗಳನ್ನು ಅಳವಡಿಸಿಕೊಂಡರೆ, ಬೀದಿ ಬದಿ ಆಹಾರವನ್ನು ಸೇವಿಸಿದರೂ ಟೈಫಾಯಿಡ್ ಕಾಣಿಸಿಕೊಳ್ಳುವ ಅಪಾಯವನ್ನು ತಡೆಯಬಹುದು.
1. ತಣ್ಣನೆಯ ಅಥವಾ ಬೆಚ್ಚನೆಯ ಆಹಾರ ಸೇವಿಸಬೇಡಿ
ನೀವು ಸೇವಿಸುವ ಆಹಾರವು ಸರಿಯಾಗಿ ಬೇಯಿಸಲಾಗಿದೆ ಮತ್ತು ಬಿಸಿ ಇದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಮೊದಲೇ ಬೇಯಿಸಿಕೊಂಡು, ನಂತರ ಪುನಃ ಬಿಸಿ ಮಾಡುವಂತಹ ಸ್ಥಳಗಳಲ್ಲಿ ಆಹಾರ ಸೇವಿಸುವುದನ್ನು ತಪ್ಪಿಸಿರಿ.
2. ಕಚ್ಚಾ ಹಣ್ಣು ಮತ್ತು ತರಕಾರಿಗಳನ್ನು ಸೇವಿಸಬೇಡಿ
ಸರಿಯಾಗಿ ತೊಳೆಯದೇ ಕತ್ತರಿಸಿ ಮಾರಾಟ ಮಾಡುವ ಹಣ್ಣುಗಳು ಮತ್ತು ತರಕಾರಿಗಳನ್ನು ತಿನ್ನಬೇಡಿ. ಇದನ್ನು ಸಿದ್ಧಪಡಿಸುವಾಗ ಮಾಲಿನ್ಯಗೊಂಡಿರಬಹುದು. ನೀವು ಹಣ್ಣನ್ನು ಸೇವಿಸಲು ಬಯಸಿದರೆ, ಬಾಳೆಹಣ್ಣು ಮತ್ತು ಕಿತ್ತಳೆಯಂತಹ ಹಣ್ಣುಗಳನ್ನು ಸೇವಿಸಿ. ಇದನ್ನು ಸಿಪ್ಪೆ ಸುಲಿದು ತಿನ್ನಬಹುದಾದ್ದರಿಂದ, ಮಾಲಿನ್ಯ ಸೋಕುವ ಸಾಧ್ಯತೆ ಕಡಿಮೆ ಇರುತ್ತದೆ.
3. ಸರಿಯಾಗಿ ಬೇಯಿಸಿಲ್ಲದ ಆಹಾರವನ್ನು ಸೇವಿಸಬೇಡಿ
ಕಚ್ಚಾ ಅಥವಾ ಸರಿಯಾಗಿ ಬೇಯಿಸಿಲ್ಲದ ಮೊಟ್ಟೆಗಳು, ಮಾಂಸ ಮತ್ತು ಮೀನು ಮಾಲಿನ್ಯದ ಅಪಾಯವನ್ನು ಒಳಗೊಂಡಿರುತ್ತದೆ. ಹೀಗಾಗಿ, ನಿಮಗೆ ನೀಡುವ ಎಲ್ಲ ಆಹಾರವನ್ನೂ ತಾಜಾ ಆಗಿ ಸಿದ್ಧಪಡಿಸಿರಬೇಕು ಮತ್ತು ಸರಿಯಾಗಿ ಬೇಯಿಸಿರಬೇಕು.
4. ಫಿಲ್ಟರ್ ಮಾಡಿಲ್ಲದ ನೀರನ್ನು ಕುಡಿಯಬೇಡಿ
ಟೈಫಾಯಿಡ್ ಒಂದು ನೀರಿನಿಂದ ಹರಡುವ ರೋಗವಾಗಿದ್ದು, ಮಾಲಿನ್ಯಗೊಂಡ ನೀರಿನ ಮೂಲಕ ಹರಡುತ್ತದೆ. ಆದ್ದರಿಂದ, ಶುದ್ಧ ನೀರನ್ನು ಕುಡಿಯುವುದು ಬಹುಮುಖ್ಯ. ನೀವು ಕುಡಿಯುತ್ತಿರುವ ನೀರಿನ ಗುಣಮಟ್ಟದ ಬಗ್ಗೆ ಶಂಕೆ ಇದ್ದರೆ, ಕುದಿಸಿದ ನೀರು ಅಥವಾ ಪ್ಯಾಕ್ ಮಾಡಲಾದ ಬಾಟಲ್ ನೀರನ್ನು ಬಳಸಿರಿ. ನೀವು ಸೇವಿಸುವ ಆಹಾರವೂ ಶುದ್ಧ ನೀರಿನಿಂದ – ಹಾಗೆಂದರೆ, ಫಿಲ್ಟರ್ ಮಾಡಿದ, ಕುದಿಸಿದ ಅಥವಾ ಖನಿಜಯುಕ್ತ ನೀರಿನಿಂದ – ತಯಾರಿಸಲ್ಪಟ್ಟಿತ್ತೇ ಎಂಬುದನ್ನು ಖಚಿತಪಡಿಸಿಕೊಳ್ಳಿ.
5. ಐಸ್ ಇರುವ ಪಾನೀಯವನ್ನು ಕುಡಿಯಬೇಡಿ
ಐಸ್ ಕ್ಯೂಬ್ ಅನ್ನು ತಯಾರಿಸಲು ಬಳಸಿದ ನೀರು ಶುಚಿಯಾಗಿದೆ ಎಂದು ಖಾತ್ರಿ ಇಲ್ಲದಿದ್ದರೆ, ಐಸ್ ಕ್ಯೂಬ್‌ಗಳು ಇರುವ ಪಾನೀಯವನ್ನು ಕುಡಿಯಬೇಡಿ. ಚಹಾ ಅಥವಾ ಕಾಫಿಯಂತಹ ಬಿಸಿಯಾದ ಪಾನೀಯವು ಸುರಕ್ಷಿತವಾಗಿರಬಹುದು.
6. ಪಾಶ್ಚರೀಕರಿಸದ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಬಳಸಬೇಡಿ
ಪಾಶ್ಚರೀಕರಿಸಿಲ್ಲದ ಹಾಲಿನಿಂದ ತಯಾರಿಸಿದ ಸಿಹಿತಿನಿಸುಗಳು, ಪಾನೀಯಗಳು ಮತ್ತು ತಿನಿಸನ್ನು ಸೇವಿಸಬೇಡಿ. ಸಾಧ್ಯವಿದ್ದರೆ, ಇದಕ್ಕೆ ಬಳಸಿ ಹಾಲು ಪ್ಯಾಕೆಟ್‌ನದ್ದಾಗಿದೆ (ಪಾಶ್ಚರೀಕರಿಸಲಾಗಿದೆ ಎಂದು ಪ್ಯಾಕೆಟ್‌ನಲ್ಲಿ ಬರೆದಿರಬೇಕು) ಎಂದು ಖಾತ್ರಿಪಡಿಸಿಕೊಳ್ಳಿ.
7. ಲಸಿಕೆ ಪಡೆದುಕೊಳ್ಳಿ
ಟೈಫಾಯಿಡ್ ಜ್ವರ ಅತ್ಯಂತ ಸಾಮಾನ್ಯವಾಗಿರುವ ಸ್ಥಳಗಳಲ್ಲಿ, ಟೈಫಾಯಿಡ್ ಲಸಿಕೆಯನ್ನು ಹಾಕಿಸಿಕೊಳ್ಳುವುದು ಸೋಂಕಿಗೆ ಮುನ್ನೆಚ್ಚರಿಕೆಯಾಗಿ ಉತ್ತಮ ವಿಧಾನವಾಗಿದೆ. ನಿಮಗೆ ಯಾವುದು ಸೂಕ್ತ ಎಂದು ಕಂಡುಕೊಳ್ಳಲು ನಿಮ್ಮ ವೈದ್ಯರ ಜೊತೆಗೆ ಮಾತನಾಡಿ.
ಉಪಸಂಹಾರ
ಬೀದಿ ಬದಿ ಆಹಾರವು ಅತ್ಯಂತ ಆಕರ್ಷಕವಾಗಿ ಕಾಣಿಸಬಹುದು. ಆದರೆ, ಇದರಲ್ಲಿ ಕೆಲವು ಅಪಾಯಗಳೂ ಇರುತ್ತವೆ. ಮಲಿನ ಆಹಾರ ಮತ್ತು ನೀರಿನಿಂದ ಟೈಫಾಯಿಡ್ ಜ್ವರವು ಹರಡಬಹುದಾದ್ದರಿಂದ, ಎಲ್ಲಿ ಮತ್ತು ಏನನ್ನು ತಿನ್ನಬೇಕು ಎಂಬ ಬಗ್ಗೆ ನೀವು ಎಚ್ಚರಿಕೆ ವಹಿಸುವುದು ಅತ್ಯಂತ ಮುಖ್ಯವಾಗಿದೆ. ಕೈಗಳನ್ನು ಚೆನ್ನಾಗಿ ತೊಳೆಯುವುದು, ತಾಜಾ ಮತ್ತು ಬಿಸಿ ಆಹಾರವನ್ನು ಸೇವಿಸುವುದು, ಹಾಗೂ ಫಿಲ್ಟರ್ ಮಾಡಿದ ಅಥವಾ ಕುದಿಸಿದ ನೀರನ್ನು ಕುಡಿಯುವುದು ಇತ್ಯಾದಿ ಪ್ರಾಥಮಿಕ ಶುಚಿತ್ವ ಅಭ್ಯಾಸಗಳನ್ನು ಅನುಸರಿಸಿದರೆ ನಿಮ್ಮನ್ನು ನೀವು ಸುರಕ್ಷಿತವಾಗಿ ಇಟ್ಟುಕೊಳ್ಳಬಹುದು. ಅನುಮಾನವಿದ್ದಾಗ, ಮನೆಯಲ್ಲೇ ಬೇಯಿಸಿದ ಆಹಾರ ಅಥವಾ ಶುಚಿತ್ವವನ್ನು ಕಾಪಾಡಿಕೊಂಡಿರುವ ಸ್ಥಳಗಳಲ್ಲಿ ಊಟ ಮಾಡುವುದರಿಂದ ಅಪಾಯ ಕಡಿಮೆ ಮಾಡಲು ಸಹಾಯವಾಗುತ್ತದೆ. ಇನ್ನು, ಲಸಿಕೆ ಪಡೆದುಕೊಳ್ಳುವುದರಿಂದ ಟೈಫಾಯ್ಡ್ ಅಪಾಯವನ್ನು ಇನ್ನಷ್ಟು ಕಡಿಮೆ ಮಾಡಬಹುದು. ಸ್ವಲ್ಪ ಎಚ್ಚರಿಕೆ ವಹಿಸಿದರೆ ಟೈಫಾಯಿಡ್ ಹಾಗೂ ಇತರ ಆಹಾರ ಸಂಬಂಧಿತ ರೋಗಗಳಿಂದ ನಿಮ್ಮನ್ನು ರಕ್ಷಣೆ ಮಾಡಿಕೊಳ್ಳಲು ಸುಲಭವಾಗುತ್ತದೆ.
ಉಲ್ಲೇಖಗಳು
ಹಕ್ಕುತ್ಯಾಗ: ಭಾರತ್ ಬಯೋಟೆಕ್ ಇಂಟರ್ನ್ಯಾಷನಲ್ ಲಿಮಿಟೆಡ್ ನಿಂದ ಸಾರ್ವಜನಿಕ ಜಾಗೃತಿ ಉಪಕ್ರಮ. ಈ ಮಾಹಿತಿಯು ಸಾಮಾನ್ಯ ಜಾಗೃತಿಗಾಗಿ ಮಾತ್ರ ಮತ್ತು ವೈದ್ಯಕೀಯ ಸಲಹೆಯನ್ನು ರೂಪಿಸುವುದಿಲ್ಲ. ತೋರಿಸಿರುವ ವೈದ್ಯರು, ವೈದ್ಯಕೀಯ ಸೌಲಭ್ಯಗಳು ಮತ್ತು ಗ್ರಾಫಿಕ್ಸ್ ವಿವರಣಾತ್ಮಕ ಉದ್ದೇಶಗಳಿಗಾಗಿ ಮಾತ್ರ. ಯಾವುದೇ ವೈದ್ಯಕೀಯ ಸಲಹೆ ಅಥವಾ ನಿಮ್ಮ ಸ್ಥಿತಿಯ ಬಗ್ಗೆ ನೀವು ಹೊಂದಿರುವ ಯಾವುದೇ ಪ್ರಶ್ನೆ ಅಥವಾ ಕಾಳಜಿಗಾಗಿ, ನಿಮ್ಮ ವೈದ್ಯರನ್ನು ಸಂಪರ್ಕಿಸಿ.