ಟೈಫಾಯಿಡ್ ಹೇಗೆ ಹರಡುತ್ತದೆ ಮತ್ತು ಪ್ರತಿಯೊಬ್ಬ ಪೋಷಕರು ತಿಳಿದುಕೊಳ್ಳಬೇಕಾದ ವಿಷಯಗಳು

ಟೈಫಾಯಿಡ್ ಎಂಬುದು ಒಂದು ಗಂಭೀರ ರೋಗವಾಗಿದ್ದು, ಇದು ಎಲ್ಲರನ್ನೂ ಬಾಧಿಸುತ್ತದೆ. ಆದರೆ, ಸ್ವಚ್ಛತೆಗೆ ಸಂಬಂಧಿಸಿದ ಹದಗೆಟ್ಟ ಅಭ್ಯಾಸಗಳು ಮತ್ತು ಮಲಿನಗೊಂಡ ಆಹಾರ ಮತ್ತು ನೀರಿನ ಸಂಪರ್ಕದಿಂದಾಗಿ ಮಕ್ಕಳು ಹೆಚ್ಚು ಅಪಾಯಕ್ಕೆ ಒಳಗಾಗುತ್ತಾರೆ. ಪಾಲಕರಾಗಿ ನೀವು, ಇದು ಹೇಗೆ ಹರಡುತ್ತದೆ, ಇದನ್ನು ತಡೆಯುವುದು ಹೇಗೆ ಮತ್ತು ನಿಮ್ಮ ಮಕ್ಕಳನ್ನು ಇದರಿಂದ ರಕ್ಷಿಸಿಟ್ಟುಕೊಳ್ಳುವುದು ಹೇಗೆ ಎಂದು ಅರ್ಥ ಮಾಡಿಕೊಳ್ಳುವುದು ಅತ್ಯವಶ್ಯಕ. ಈ ಲೇಖನದಲ್ಲಿ, ಟೈಫಾಯಿಡ್ ಸೋಂಕು, ಇದರ ತಡೆ ಮತ್ತು ನಿಯಂತ್ರಣದ ಬಗ್ಗೆ ಚರ್ಚಿಸೋಣ.
ಟೈಫಾಯಿಡ್ ಹೇಗೆ ಹರಡುತ್ತದೆ?
ಟೈಫಾಯಿಡ್ ಜ್ವರವು ಸಾಲ್ಮೊನೆಲ್ಲಾ ಟೈಫಿ ಬ್ಯಾಕ್ಟೀರಿಯಾದಿಂದ ಉಂಟಾಗುತ್ತದೆ. ಇದು ದೇಹಕ್ಕೆ ಬಾಯಿಯ ಮೂಲಕ ಪ್ರವೇಶಿಸುತ್ತದೆ. ಸಾಮಾನ್ಯವಾಗಿ ಮಲಿನಗೊಂಡಿರುವ ಆಹಾರ ಅಥವಾ ನೀರಿನಿಂದ ಇದು ಹರಡುತ್ತದೆ. ದೇಹದ ಒಳಕ್ಕೆ ಹೋದ ನಂತರ, ಕರುಳುಗಳ ಮೂಲಕ ಸಾಲ್ಮೊನೆಲ್ಲಾ ಸೋಂಕು ಹರಡುತ್ತದೆ. ರಕ್ತಸಂಚಾರದ ಮೂಲಕ ದೇಹವನ್ನು ಆವರಿಸಿಕೊಳ್ಳುತ್ತದೆ ಮತ್ತು ಜ್ವರ ಹಾಗೂ ಇತರ ಗುಣಲಕ್ಷಣಗಳನ್ನು ಉಂಟುಮಾಡುತ್ತದೆ.
ನಿಮ್ಮ ಮಕ್ಕಳಲ್ಲಿ ಟೈಫಾಯಿಡ್ ಹರಡುವ ಸಾಮಾನ್ಯ ವಿಧಾನಗಳು:
- ಮಲಿನಗೊಂಡಿರುವ ಕುಡಿಯುವ ನೀರು
- ಶುಚಿಯಲ್ಲದ ಬೀದಿ ಬದಿ ಆಹಾರವನ್ನು ಸೇವಿಸುವುದು. ಅದರಲ್ಲೂ ವಿಶೇಷವಾಗಿ ತಂಪಾದ ಪಾನೀಯಗಳು (ಹಲವು ಸಮಯದವರೆಗೆ ಪ್ರದರ್ಶನಕ್ಕೆ ಇಟ್ಟಿರುವ ಹಣ್ಣುಗಳು, ಚಾಟ್, ಸಿಹಿತಿಂಡಿಗಳು ಅಥವಾ ತಿನಿಸುಗಳು)
- ಸ್ಥಳೀಯವಾಗಿ ತಯಾರಿಸಿದ ಮತ್ತು ಫಿಲ್ಟರ್ ಮಾಡದ ಅಥವಾ ಕಲುಷಿತ ನೀರನ್ನು ಒಳಗೊಂಡಿರುವ ಐಸ್ ಕ್ರೀಮ್ ಅಥವಾ ಐಸ್ ‘ಗೋಲಾ’ಗಳನ್ನು ಸೇವಿಸುವುದು
- ಬೀದಿ ಬದಿ ಮಾರಾಟಗಾರರಿಂದ ಅಸುರಕ್ಷಿತವಾದ ಕಬ್ಬಿನ ಹಾಲು ಅಥವಾ ಇತರ ಹಣ್ಣಿನ ರಸಗಳನ್ನು (ಐಸ್ ಸಹಿತ ಅಥವಾ ರಹಿತ) ಸೇವಿಸುವುದು
ದೀರ್ಘಕಾಲೀನ ಸೋಂಕು ಹರಡುವವರು ಯಾರು?
ಕೆಲವು ಬಾರಿ ಟೈಫಾಯಿಡ್‌ನಿಂದ ಚೇತರಿಸಿಕೊಂಡರೂ ಕೂಡಾ ಕೆಲವು ರೋಗಿಗಳಲ್ಲಿ ಗುಣಲಕ್ಷಣಗಳು ಇಲ್ಲದೇ ಇದ್ದರೂ, ಕರುಳಿನಲ್ಲಿ ಬ್ಯಾಕ್ಟೀರಿಯಾಗಳು ಇರುತ್ತವೆ. ಈ ವ್ಯಕ್ತಿಗಳನ್ನು ಕ್ರೋನಿಕ್ ಕ್ಯಾರಿಯರ್‌ಗಳು ಎಂದು ಕರೆಯಲಾಗುತ್ತದೆ. ಇವರು ಹಲವು ವರ್ಷಗಳವರೆಗೆ ಇತರರಿಗೆ ಬ್ಯಾಕ್ಟೀರಿಯಾವನ್ನು ಹರಡುತ್ತಿರಬಹುದು. ಸಮುದಾಯದಲ್ಲಿ ಟೈಫಾಯಿಡ್ ಹರಡುವಿಕೆಯ ಗಮನಾರ್ಹ ಅಪಾಯವನ್ನು ಅವರು ಉಂಟುಮಾಡುತ್ತಾರೆ. ಅಸುರಕ್ಷಿತ ಪರಿಸರದಲ್ಲಿ ಸೋಂಕು ಹರಡುವವರು ತಯಾರಿಸಿದ ಆಹಾರವನ್ನು ಸೇವಿಸಿದರೆ ಅಥವಾ ಶಾಲೆಗಳಂತಹ ಸ್ಥಳಗಳಲ್ಲಿ ಕ್ರೋನಿಕ್ ಕ್ಯಾರಿಯರ್ ಜೊತೆಗೆ ಪರೋಕ್ಷ ಸಂಪರ್ಕಕ್ಕೆ ಬಂದರೆ ಮಕ್ಕಳಿಗೆ ಸೋಂಕು ಉಂಟಾಗಬಹುದು.
ಟೈಫಾಯಿಡ್‌ನ ಗುಣಲಕ್ಷಣಗಳು ಯಾವುವು?
- ನಿಧಾನವಾಗಿ ಜ್ವರ ಹೆಚ್ಚುವುದು, ಇದು ಹಲವು ವಾರಗಳವರೆಗೆ ಇರಬಹುದು
- ಆಲಸ್ಯ ಅಥವಾ ಮಂದತೆ
- ವಾಂತಿ, ಬೇಧಿ ಅಥವಾ ಮಲಬದ್ಧತೆ
- ಕೆಮ್ಮು
- ಅಪರೂಪದ ಪ್ರಕರಣಗಳಲ್ಲಿ, ಒಂದು ದದ್ದು ಎದೆಯ ಮೇಲೆ ಕಾಣಿಸಬಹುದು
ನಿಮ್ಮ ಮಗುವು ಈ ಯಾವುದೇ ಗುಣಲಕ್ಷಣಗಳನ್ನು ಎದುರಿಸಿದರೆ, ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ. ಚಿಕಿತ್ಸೆ ನೀಡದೇ ಇದ್ದರೆ, ದೀರ್ಘಕಾಲೀನ ಸಂಕೀರ್ಣತೆಗಳಿಗೆ ಕಾರಣವಾಗಬಹುದು.
ಒಂದು ಮಗುವಿನಿಂದ ಇನ್ನೊಂದಕ್ಕೆ ಟೈಫಾಯಿಡ್ ಹರಡಬಹುದೇ?
ಸಾಮಾನ್ಯ ಸೋಂಕುಗಳಂತೆ, ಟೈಫಾಯಿಡ್ ನೇರವಾಗಿ, ಅಥವಾ ವ್ಯಕ್ತಿಯಿಂದ ವ್ಯಕ್ತಿಯ ಸಂಪರ್ಕದಿಂದ ಹರಡುವುದಿಲ್ಲ. ಆದರೆ, ಇದು ಪರೋಕ್ಷವಾಗಿ ಹರಡುತ್ತದೆ. ಅದರಲ್ಲೂ, ಶುಚಿತ್ವ ಸರಿಯಾಗಿಲ್ಲದ ಕಡೆ ಇದು ಹೆಚ್ಚು ಹರಡುತ್ತದೆ. ಉದಾಹರಣೆಗೆ, ಸೋಂಕು ಇರುವ ಮಗು ಶೌಚಾಲಯಕ್ಕೆ ಹೋಗಿ ಬಂದು, ತನ್ನ ಕೈಗಳನ್ನು ಸರಿಯಾಗಿ ತೊಳೆದುಕೊಳ್ಳದೇ ತನ್ನ ಸೋದರ ಸೋದರಿಯರೊಂದಿಗೆ ಬೆರೆತರೆ ಅಥವಾ ಅವರ ಬಾಯಿಯಲ್ಲಿ ಕೈಯನ್ನಿಟ್ಟರೆ ಅಥವಾ ಕೈಗಳನ್ನು ತೊಳೆದುಕೊಳ್ಳದೇ ಆಹಾರ ಸೇವಿಸಿದರೆ, ಸೋಂಕು ಹರಡುವ ಸಾಧ್ಯತೆ ಇರುತ್ತದೆ.
ಟೈಫಾಯಿಡ್ ತಡೆಯುವುದು ಹೇಗೆ?
ನಿಮ್ಮ ಮಗುವಿಗೆ ಟೈಫಾಯಿಡ್ ಹರಡುವುದನ್ನು ತಡೆಯಲು, ಈ ಕೆಳಗಿನ ಸರಳ ಮುನ್ನೆಚ್ಚರಿಕೆ ಕ್ರಮಗಳನ್ನು ನೀವು ತೆಗೆದುಕೊಳ್ಳಬಹುದು:
- ನಿಯಮಿತವಾಗಿ ಕೈ ತೊಳೆಯುವುದು, ವಿಶೇಷವಾಗಿ ಅಡುಗೆ ಮಾಡುವ ಮೊದಲು, ಆಹಾರ ಬಡಿಸುವ ಮೊದಲು ಅಥವಾ ತಿನ್ನುವ ಮೊದಲು.
- ಶೌಚಾಲಯ ಬಳಸಿದ ನಂತರ ಯಾವಾಗಲೂ ಕೈ ತೊಳೆಯಲು ಅವರಿಗೆ ಕಲಿಸಿ.
- ಸಂಸ್ಕರಿಸದ ನೀರನ್ನು ಕುಡಿಯದಿರಲು ಅವರಿಗೆ ಕಲಿಸಿ. ಫಿಲ್ಟರ್ ಮಾಡಿದ ಅಥವಾ ಬೇಯಿಸಿದ ನೀರನ್ನು ಮಾತ್ರ ಕುಡಿಯಿರಿ.
- ಹಣ್ಣುಗಳು ಮತ್ತು ತರಕಾರಿಗಳನ್ನು ಸರಿಯಾಗಿ ತೊಳೆಯಿರಿ ಮತ್ತು ಎಲ್ಲಾ ಊಟಗಳನ್ನು ಚೆನ್ನಾಗಿ ಬೇಯಿಸಿ.
- ಅವರು ಹೊರಗೆ ತಿನ್ನುತ್ತಿದ್ದರೆ, ಹಸಿ ಆಹಾರವನ್ನು ಸೇವಿಸಬೇಡಿ. ಕಿತ್ತಳೆ ಅಥವಾ ಬಾಳೆಹಣ್ಣಿನಂತಹ ಸಿಪ್ಪೆ ಸುಲಿದ ಹಣ್ಣುಗಳನ್ನು ಅಥವಾ ಹೊಸದಾಗಿ ತಯಾರಿಸಿ ಬಿಸಿಯಾಗಿ ಬಡಿಸಿದ ಆಹಾರವನ್ನು ಸೇವಿಸಿ.
- ಲಸಿಕೆ ಹಾಕಿಸಿಕೊಳ್ಳುವುದನ್ನು ಪರಿಗಣಿಸಿ, ಏಕೆಂದರೆ ಇದು ಅವರನ್ನು ರೋಗದಿಂದ ರಕ್ಷಿಸಿಕೊಳ್ಳಲು ಉತ್ತಮ ಮಾರ್ಗವಾಗಿದೆ.
ಟೈಫಾಯಿಡ್ ಲಸಿಕೆಯು ನನ್ನ ಮತ್ತು ನನ್ನ ಕುಟುಂಬವನ್ನು ಹೇಗೆ ರಕ್ಷಿಸಬಹುದು?
ಟೈಫಾಯಿಡ್ ನಿಂದ ರಕ್ಷಣೆ ಪಡೆಯಲು ಲಸಿಕೆ ಹಾಕಿಸಿಕೊಳ್ಳುವುದು ಅತ್ಯಂತ ಪರಿಣಾಮಕಾರಿ ಮಾರ್ಗ. ಟೈಫಾಯಿಡ್ ನಿಂದ ಚೇತರಿಸಿಕೊಂಡ ರೋಗಿಗಳಲ್ಲಿ ಕೂಡ ರೋಗ ಮರುಕಳಿಸಬಹುದಾಗಿದೆ. ನೈಸರ್ಗಿಕ ರಕ್ಷಣೆಯು ದೀರ್ಘಕಾಲೀನ ಮತ್ತು ಸೂಕ್ತ ರೋಗನಿರೋಧಕತೆಯನ್ನು ನೀಡುವುದಿಲ್ಲ. ಈಗಾಗಲೇ ಸೋಂಕು ಇದ್ದರೂ ಕೂಡಾ ಲಸಿಕೆಯು ಟೈಫಾಯಿಡ್ ನಿಂದ ನಿಮ್ಮನ್ನು ರಕ್ಷಿಸುತ್ತದೆ ಎಂಬ ಕಾರಣಕ್ಕೆ ಶಿಫಾರಸು ಮಾಡಲಾಗಿದೆ. ಇದು ದೀರ್ಘಕಾಲೀನ ಕ್ಯಾರಿಯರ್‌ಗಳಿಂದ ನಿಮ್ಮನ್ನು ರಕ್ಷಿಸಿಡುತ್ತದೆ ಮತ್ತು ರೋಗ ಹರಡದಂತೆ ಸಮುದಾಯವನ್ನು ರಕ್ಷಿಸಲು ಸಹಾಯ ಮಾಡುತ್ತದೆ.
ಟೈಫಾಯಿಡ್ ನಿಂದ ಬಳಲುತ್ತಿರುವ ಮಕ್ಕಳು ಚೇತರಿಸಿಕೊಂಡ 4 ರಿಂದ 6 ವಾರಗಳ ನಂತರ ಲಸಿಕೆ ಹಾಕಿಸಬೇಕು.
ಉಪಸಂಹಾರ
ಟೈಫಾಯಿಡ್ ಒಂದು ಗಂಭೀರ ಹಾಗೂ ತಡೆಯಬಹುದಾದ ರೋಗವಾಗಿದ್ದು, ಇದು ಮಲಿನವಾದ ಆಹಾರ ಮತ್ತು ನೀರಿನ ಮೂಲಕ ಹರಡುತ್ತದೆ. ಇದು ಹೇಗೆ ಹರಡುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಮತ್ತು ಉತ್ತಮ ಶುಚಿತ್ವವನ್ನು ಅಭ್ಯಾಸ ಮಾಡುವುದು, ಸುರಕ್ಷಿತ ಆಹಾರ ಮತ್ತು ನೀರನ್ನು ಸೇವಿಸುವುದು ಮತ್ತು ಲಸಿಕೆ ಪಡೆಯುವುದರಂತಹ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ತಮ್ಮ ಮಕ್ಕಳಿಗೆ ಸೋಂಕು ಹರಡುವಿಕೆ ಪ್ರಮಾಣವನ್ನು ಗಮನಾರ್ಹವಾಗಿ ಪಾಲಕರು ಕಡಿಮೆ ಮಾಡಬಹುದು. ಟೈಫಾಯಿಡ್ ದೀರ್ಘಕಾಲೀನ ಸಂಕೀರ್ಣತೆಗಳನ್ನು ಹೊಂದಿರಬಹುದು ಮತ್ತು ಕ್ರೋನಿಕ್ ಕ್ಯಾರಿಯರ್‌ಗಳನ್ನು ಹೊಂದಿರಬಹುದಾದ್ದರಿಂದ, ನಾವು ಬ್ಯಾಕ್ಟೀರಿಯಾವನ್ನು ನಮಗೆ ಗೊತ್ತಿಲ್ಲದೇ ಹರಡುತ್ತಿರಬಹುದು. ಹೀಗಾಗಿ, ನಾವು ಎಚ್ಚರಿಕೆಯಿಂದ ಇರುವುದು ಅತ್ಯಂತ ಮುಖ್ಯವಾಗಿದೆ. ಟೈಫಾಯಿಡ್ ವಿರುದ್ಧ ರಕ್ಷಣೆಯನ್ನು ಹೊಂದಲು ಲಸಿಕೆಯು ಅತ್ಯಂತ ಪರಿಣಾಮಕಾರಿ ವಿಧಾನವಾಗಿದೆ ಮತ್ತು ನಿಮ್ಮ ಪ್ರೀತಿ ಪಾತ್ರರಿಗೆ ಆರೋಗ್ಯಕರ ಮತ್ತು ಸುರಕ್ಷಿತ ಭವಿಷ್ಯವನ್ನು ಒದಗಿಸುತ್ತದೆ.
ಉಲ್ಲೇಖಗಳು
ಹಕ್ಕುತ್ಯಾಗ: ಭಾರತ್ ಬಯೋಟೆಕ್ ಇಂಟರ್ನ್ಯಾಷನಲ್ ಲಿಮಿಟೆಡ್ ನಿಂದ ಸಾರ್ವಜನಿಕ ಜಾಗೃತಿ ಉಪಕ್ರಮ. ಈ ಮಾಹಿತಿಯು ಸಾಮಾನ್ಯ ಜಾಗೃತಿಗಾಗಿ ಮಾತ್ರ ಮತ್ತು ವೈದ್ಯಕೀಯ ಸಲಹೆಯನ್ನು ರೂಪಿಸುವುದಿಲ್ಲ. ತೋರಿಸಿರುವ ವೈದ್ಯರು, ವೈದ್ಯಕೀಯ ಸೌಲಭ್ಯಗಳು ಮತ್ತು ಗ್ರಾಫಿಕ್ಸ್ ವಿವರಣಾತ್ಮಕ ಉದ್ದೇಶಗಳಿಗಾಗಿ ಮಾತ್ರ. ಯಾವುದೇ ವೈದ್ಯಕೀಯ ಸಲಹೆ ಅಥವಾ ನಿಮ್ಮ ಸ್ಥಿತಿಯ ಬಗ್ಗೆ ನೀವು ಹೊಂದಿರುವ ಯಾವುದೇ ಪ್ರಶ್ನೆ ಅಥವಾ ಕಾಳಜಿಗಾಗಿ, ನಿಮ್ಮ ವೈದ್ಯರನ್ನು ಸಂಪರ್ಕಿಸಿ.