ನನಗೆ ಟೈಫಾಯಿಡ್ ಇದೆಯೇ ಎಂದು ನನಗೆ ಹೇಗೆ ತಿಳಿಯುವುದು?
ಕಾಯಬೇಡಿ ಅಥವಾ ಊಹಿಸಬೇಡಿ, ಪರೀಕ್ಷೆ ಮಾಡಿಸಿಕೊಳ್ಳಿ.

ತ್ವರಿತವಾಗಿ ಟೈಫಾಯಿಡ್ ರೋಗಪತ್ತೆ ಮಾಡಿಸಿಕೊಂಡಾಗ ಗಂಭೀರ ತೊಡಕುಗಳನ್ನು ಮತ್ತು ಆಸ್ಪತ್ರೆಗೆ ದಾಖಲಾಗುವುದನ್ನು ತಡೆಯಲು ಸಹಾಯವಾಗುತ್ತದೆ. ನಿಮಗೆ ಯಾವುದೇ ಆರಂಭಿಕ ರೋಗಲಕ್ಷಣಗಳು ಕಂಡುಬಂದರೆ, ಉದಾಹರಣೆಗೆ ವಿಪರೀತ ಜ್ವರ, ಬಲಹೀನತೆ, ಹೊಟ್ಟೆ ನೋವು, ಅತಿಸಾರ ಅಥವಾ ಮಲಬದ್ಧತೆ ಕಂಡುಬಂದರೆ, ತಕ್ಷಣ ನಿಮ್ಮ ವೈದ್ಯರನ್ನು ಸಂಪರ್ಕಿಸಿ.[1] ನಿಮಗೆ ಮೂರು ದಿನಗಳಿಗಿಂತ ಹೆಚ್ಚು ಕಾಲ ನಿರಂತರ ಜ್ವರವಿದ್ದರೆ, ವಿಶೇಷವಾಗಿ ಪ್ರಯಾಣದ ನಂತರ ಅಥವಾ ಹೆಚ್ಚಿನ ಸಂಖ್ಯೆಯ ಟೈಫಾಯಿಡ್ ಪ್ರಕರಣಗಳು ಇರುವ ಪ್ರದೇಶದಲ್ಲಿ ವಾಸಿಸಿದ ನಂತರ ಜ್ವರ ಕಂಡುಬಂದರೆ, ತಡಮಾಡದೇ ವೈದ್ಯಕೀಯ ನೆರವು ಪಡೆಯಿರಿ.[2]
ರಕ್ತ ಪರೀಕ್ಷೆಗಳು ಟೈಫಾಯಿಡ್ ಜ್ವರ ಇದೆಯೇ ಎಂಬ ಬಗ್ಗೆ ಅತ್ಯಂತ ವಿಶ್ವಾಸಾರ್ಹ ಮಾಹಿತಿಯನ್ನು ನೀಡುತ್ತವೆ. ಮಲ ಮತ್ತು ಮೂತ್ರ ಪರೀಕ್ಷೆಗಳ ವಿಶ್ವಾಸಾರ್ಹತೆ ಕಡಿಮೆ ಇರುವುದರಿಂದ ಸಾಮಾನ್ಯವಾಗಿ ಅದನ್ನು ಶಿಫಾರಸು ಮಾಡಲಾಗುವುದಿಲ್ಲ.[2]
ಟೈಫಾಯಿಡ್ ಪರೀಕ್ಷೆಗಳ ವಿಧಗಳು

ನಿಮಗೆ ಆರಂಭಿಕ ಹಂತದ ಜ್ವರವಿದೆ ಎಂದು ನಿಮ್ಮ ವೈದ್ಯರು ಶಂಕಿಸಿದಾಗ ಟೈಫಾಯಿಡ್ಗಾಗಿ ದೈಹಿಕ ಪರೀಕ್ಷೆಗಳನ್ನು ಮಾಡಲಾಗುತ್ತದೆ. ಈ ಹಂತಗಳಲ್ಲಿ, ರೋಗಿಗಳು ಬಿಳಿಚಿಕೊಂಡಂತೆ ಕಾಣಬಹುದು, ಆಲಸ್ಯ ಉಂಟಾಗಬಹುದು ಮತ್ತು ನಿರ್ಜಲೀಕರಣ ಉಂಟಾಗಬಹುದು. ಚರ್ಮದ ಮೇಲೆ, ವಿಶೇಷವಾಗಿ ನಿಮ್ಮ ಎದೆ ಮತ್ತು ಹೊಟ್ಟೆಯ ಮೇಲೆ ದದ್ದುಗಳು ಅಥವಾ ಕಲೆಗಳು ಕಾಣಿಸಿಕೊಳ್ಳಬಹುದು (ಇದು ಕಪ್ಪು ಚರ್ಮ ಇರುವವರಿಗೆ ಸುಲಭವಾಗಿ ಕಾಣಿಸುವುದಿಲ್ಲ). ನಿಮ್ಮ ರೋಗಲಕ್ಷಣಗಳ ಆಧಾರದ ಮೇಲೆ, ನಿಮ್ಮ ವೈದ್ಯರು ಟೈಫಾಯಿಡ್ ಪರೀಕ್ಷೆಗೆ ಒಳಗಾಗುವಂತೆ ಸೂಚಿಸುತ್ತಾರೆ.[2]


ಟೈಫಾಯಿಡ್ ಲ್ಯಾಬ್ ಪರೀಕ್ಷೆಗಳನ್ನು ರಕ್ತದ ಮಾದರಿಗಳೊಂದಿಗೆ ವಾಡಿಕೆಯಂತೆ ಮಾಡಬಹುದಾಗಿದೆ. ಮತ್ತು ವಿರಳವಾಗಿ ಮೂತ್ರ, ಮಲ ಮತ್ತು ಮೂಳೆ ಮಜ್ಜೆಯನ್ನು ಬಳಸಿಯೂ ಮಾಡಬಹುದಾಗಿದೆ.[3]
ರಕ್ತ ಪರೀಕ್ಷೆ
ಟೈಫಾಯಿಡ್ ಪತ್ತೆ ಮಾಡಲು ರಕ್ತ ಪರೀಕ್ಷೆ ಅತ್ಯಂತ ಆದ್ಯತೆಯ, ವಿಶ್ವಾಸಾರ್ಹ ಮತ್ತು ಸಾಮಾನ್ಯ ವಿಧಾನವಾಗಿದೆ. ಆದರೆ, ಇದು ತನ್ನದೇ ಆದ ಮಿತಿಗಳನ್ನು ಹೊಂದಿದೆ.[2] ಇದು ಮೊದಲ ವಾರದಲ್ಲಿ 90% ಪತ್ತೆ ಪ್ರಮಾಣವನ್ನು ಹೊಂದಿದೆ. ಮತ್ತು ನಕಾರಾತ್ಮಕ ಫಲಿತಾಂಶವನ್ನು ದೃಢೀಕರಿಸಲು ಐದು ದಿನಗಳವರೆಗೆಮೈಕ್ರೋಬಯಾಲಜಿ ಪ್ರಯೋಗಾಲಯದಲ್ಲಿ ಮೇಲ್ವಿಚಾರಣೆ ಮಾಡಬೇಕಾಗಬಹುದು[4]
ಅಸ್ಥಿಮಜ್ಜೆ ಪರೀಕ್ಷೆ
ಯಾವುದೇ ಸ್ಪಷ್ಟ ಕಾರಣವಿಲ್ಲದೆ ವಾರಗಳವರೆಗೆ ಮುಂದುವರಿಯುವ ಜ್ವರವನ್ನು ತನಿಖೆ ಮಾಡಲು ಅಸ್ಥಿಮಜ್ಜೆ ಪರೀಕ್ಷೆ ಆದ್ಯತೆಯ ಪರೀಕ್ಷೆಗಳಲ್ಲಿ ಒಂದಾಗಿದೆ. ಆಂಟಿಬಯಾಟಿಕ್ ಚಿಕಿತ್ಸೆಯ ನಂತರವೂ ಬ್ಯಾಕ್ಟೀರಿಯಾ ಕಂಡುಬರುವುದರಿಂದ ಅನಾರೋಗ್ಯದ ನಂತರದ ಹಂತಗಳಲ್ಲಿ ಟೈಫಾಯಿಡ್ ಪತ್ತೆಗಾಗಿ ಈ ಪರೀಕ್ಷೆಯನ್ನು ಬಳಸಬಹುದು.[4] ಆದಾಗ್ಯೂ, ಈ ಪರೀಕ್ಷೆಯನ್ನು ಸಾಮಾನ್ಯವಾಗಿ ಬಳಸಲಾಗುವುದಿಲ್ಲ. ಏಕೆಂದರೆ, ಇದಕ್ಕೆ ಚುಚ್ಚುವಿಕೆ ಅಗತ್ಯವಿರುತ್ತದೆ ಮತ್ತು ಎಲ್ಲ ಸನ್ನಿವೇಶಗಳಲ್ಲಿ ಕಾರ್ಯಸಾಧ್ಯವಲ್ಲ.[5] ಅಪರಿಚಿತ ಮೂಲದ ಜ್ವರವನ್ನು ತನಿಖೆ ಮಾಡಲು ಅಸ್ಥಿಮಜ್ಜೆ ಪರೀಕ್ಷೆಯನ್ನು ನಡೆಸಿದರೆ, ಟೈಫಾಯಿಡ್ ಅನ್ನು ತಳ್ಳಿಹಾಕಲು ಮಾದರಿಗಳನ್ನು ತಪಾಸಣೆಗೆ ಕಳುಹಿಸಬೇಕು.
ಮಲ ಪರೀಕ್ಷೆ
ಟೈಫಾಯಿಡ್ ರೋಗನಿರ್ಣಯಕ್ಕೆ ಮಲ ಪರೀಕ್ಷೆ ವಿಶ್ವಾಸಾರ್ಹವಲ್ಲ. ಏಕೆಂದರೆ ಇದು ಚೇತರಿಸಿಕೊಳ್ಳುತ್ತಿರುವ ರೋಗಿಗಳಲ್ಲಿ ಸಕಾರಾತ್ಮಕ ಫಲಿತಾಂಶಗಳನ್ನು ತೋರಿಸಬಹುದು. ಆದಾಗ್ಯೂ, ವ್ಯಕ್ತಿಯೊಬ್ಬರು ದೀರ್ಘಕಾಲದಿಂದ ರೋಗವನ್ನು ಹರಡುತ್ತಿದ್ದಾರೆಯೇ ಎಂದು ನಿರ್ಧರಿಸಲು ಇದು ಸಹಾಯ ಮಾಡುತ್ತದೆ. ಟೈಫಾಯಿಡ್ ಅನ್ನು ಪರೀಕ್ಷಿಸಲು ಮೂತ್ರ ಪರೀಕ್ಷೆ ಪ್ರಮಾಣಿತ ವಿಧಾನವಲ್ಲ.[2]
ವಿಡಾಲ್ ಪರೀಕ್ಷೆ
ಭಾರತದಲ್ಲಿ, ಟೈಫಾಯಿಡ್ ಜ್ವರವನ್ನು ಪತ್ತೆಹಚ್ಚಲು ವಿಡಾಲ್ ಪರೀಕ್ಷೆಯನ್ನು ವ್ಯಾಪಕವಾಗಿ ಬಳಸಲಾಗುತ್ತದೆ.[2] ಇದು ಟೈಫಾಯಿಡ್ ಬ್ಯಾಕ್ಟೀರಿಯಾದ ವಿರುದ್ಧ ಪ್ರತಿಕಾಯಗಳು ಇವೆಯೇ ಎಂಬುದನ್ನು ಪತ್ತೆ ಮಾಡುತ್ತದೆ ಮತ್ತು ಅನಾರೋಗ್ಯ ಕಂಡುಬಂದ ಎರಡನೇ ವಾರದಲ್ಲಿ ಪರೀಕ್ಷೆ ಮಾಡಲಾಗುತ್ತದೆ. ಆದಾಗ್ಯೂ, ವಿಡಾಲ್ ಪರೀಕ್ಷೆಯು ಕಡಿಮೆ ಸೂಕ್ಷ್ಮತೆ ಮತ್ತು ನಿರ್ದಿಷ್ಟತೆಯನ್ನು ಹೊಂದಿದೆ. ಅಂದರೆ, ಇದು ಕೆಲವೊಮ್ಮೆ ಮಲೇರಿಯಾ ಇದ್ದಾಗ ಅಥವಾ ಇತರ ಬ್ಯಾಕ್ಟೀರಿಯಾಗಳಿಂದ ಸೋಂಕು ಉಂಟಾದರೆ ತಪ್ಪು ಫಲಿತಾಂಶವನ್ನು ನೀಡಬಹುದು.[4]
ಸಂಬಂಧಿತ ಪುಟಗಳು
ಉಲ್ಲೇಖಗಳು
ಹಕ್ಕುತ್ಯಾಗ: ಭಾರತ್ ಬಯೋಟೆಕ್ ಇಂಟರ್ನ್ಯಾಷನಲ್ ಲಿಮಿಟೆಡ್ ನಿಂದ ಸಾರ್ವಜನಿಕ ಜಾಗೃತಿ ಉಪಕ್ರಮ. ಈ ಮಾಹಿತಿಯು ಸಾಮಾನ್ಯ ಜಾಗೃತಿಗಾಗಿ ಮಾತ್ರ ಮತ್ತು ವೈದ್ಯಕೀಯ ಸಲಹೆಯನ್ನು ರೂಪಿಸುವುದಿಲ್ಲ. ತೋರಿಸಿರುವ ವೈದ್ಯರು, ವೈದ್ಯಕೀಯ ಸೌಲಭ್ಯಗಳು ಮತ್ತು ಗ್ರಾಫಿಕ್ಸ್ ವಿವರಣಾತ್ಮಕ ಉದ್ದೇಶಗಳಿಗಾಗಿ ಮಾತ್ರ. ಯಾವುದೇ ವೈದ್ಯಕೀಯ ಸಲಹೆ ಅಥವಾ ನಿಮ್ಮ ಸ್ಥಿತಿಯ ಬಗ್ಗೆ ನೀವು ಹೊಂದಿರುವ ಯಾವುದೇ ಪ್ರಶ್ನೆ ಅಥವಾ ಕಾಳಜಿಗಾಗಿ, ನಿಮ್ಮ ವೈದ್ಯರನ್ನು ಸಂಪರ್ಕಿಸಿ.